1929ರ ಸೆಪ್ಟೆಂಬರ್ 26ರಂದು ಮಲೆನಾಡಿನಲ್ಲಿ ಜನಿಸಿದರು. ಹೆಸರಾಂತ ವೈದ್ಯರು ಹಾಗೂ ಲೇಖಕರು. ತಮ್ಮ ವೈದ್ಯವೃತ್ತಿಯನ್ನೆಲ್ಲ ಗ್ರಾಮೀಣ ಪ್ರದೇಶಕ್ಕೆ ಮುಡಿಪಾಗಿರಿಸಿದರು. ಬಾಲ್ಯದಿಂದಲೂ ಕಷ್ಟ-ನಿಷ್ಠುರಗಳ ಜೊತೆಯಲ್ಲೇ ಬೆಳೆದ ಇವರು ಉತ್ತಮ ವೈದ್ಯರಾಗಿ, ಶಸ್ತ್ರವೈದ್ಯರಾಗಿ ಮತ್ತು ಲೇಖಕರಾಗಿ ಹೆಸರುಗಳಿಸಿದ್ದಾರೆ.  ಜನಸಾಮಾನ್ಯರಲ್ಲಿ ಉತ್ತಮ ಆರೋಗ್ಯದ ಬಗ್ಗೆ ಜಾಗೃತಿಯುಂಟುಮಾಡುವ ಅನೇಕ ವೈದ್ಯಕೀಯ ಲೇಖನಗಳನ್ನು ಕನ್ನಡದಲ್ಲಿ ಸರಳವಾಗಿ ಬರೆದಿದ್ದಾರೆ. ಸ್ವಂತ ಅನುಭವದಿಂದ ಲೇಖನ ಬರೆಯುವ ಇವರ ನಿರೂಪಣಾ ಶೈಲಿ ಓದುಗರನ್ನು ಒಂದೇ ಬಾರಿಗೆ ಸೆಳೆದುಕೊಂಡುಬಿಡುತ್ತದೆ. ಒಟ್ಟು 21 ಪುಸ್ತಕಗಳನ್ನು ರಚಿಸಿರುವ ಇವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಇವರ ಮೂರು ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿವೆ. ವೈದ್ಯಲೋಕದ ಕೌತುಕಗಳು, ಮಾನವ ಯಂತ್ರ ಕುಸುಮ ಬೀಳದಂತೆ ತಡೆಯುವುದು ಹೇಗೆ? ಹಾಗೂ ಡಾ|| ವ್ಲಾಡಿಯರ್ ಹಾಫ್ಕಿನ್ ಪುಸ್ತಕಗಳು ಬಹುಮಾನ ಪಡೆದಿವೆ. ಇವಲ್ಲದೆ ಇತರ ಪುಸ್ತಕಗಳಿಗೆ ಆರ್ಯಭಟ ಸಾಹಿತ್ಯ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಡಾ|| ಪಿ.ಎಸ್. ಶಂಕರ್ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ರತ್ನ ಪ್ರಶಸ್ತಿ, ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಡಾ|| ಹೆಚ್.ಡಿ. ಚಂದ್ರಪ್ಪಗೌಡರು ಬದುಕಿನದುದ್ದಕ್ಕೂ ಪ್ರಾಮಾಣಿಕರಾಗಿ, ನಿಷ್ಕಳಂಕ ರೀತಿಯಲ್ಲಿ ಜನಸೇವೆ ಮಾಡಿದ್ದಾರೆ.

ಎಚ್.ಡಿ. ಚಂದ್ರಪ್ಪಗೌಡರು ಸರ್ಕಾರಿ ಸೇವೆಯಲ್ಲಿ 28 ವರ್ಷಗಳ ಕಾಲ ಶಿಕಾರಿಪುರ, ಕೆ.ಜಿ.ಎಫ್, ಮೈಸೂರು, ಮಂಗಳೂರು, ಕೊಳ್ಳೇಗಾಲ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ವೈದ್ಯರಾಗಿ, ಶಸ್ತ್ರವೈದ್ಯರಾಗಿ, ಜಿಲ್ಲಾ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದಾರೆ. 
ಇವರ ಇತರ ಕೆಲವು ಪ್ರಮುಖ ಪುಸ್ತಕಗಳು: ಕ್ಯಾನ್ಸರ್ಲೋಕ, ನನಗೆ ಬೈಪಾಸ್ ಆಯಿತು, ವಿಶ್ವವಿಖ್ಯಾತ ವೈದ್ಯವಿಜ್ಞಾನಿಗಳು, ಜೀರ್ಣಾಂಗರೋಗಗಳು, ಡಾ|| ವ್ಲಾಡಿಯರ್ ಹಾಫ್ಕಿನ್, ಡಾ|| ಯಲ್ಲಾಪ್ಯುಡ ಸುಬ್ಬರಾವ್ ಇತ್ಯಾದಿ. 	(ವಿ.ಬಿ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ